ಪರಭಾಷೆ ಸಿನಿಮಾಗಳ ಹಾವಳಿ ಇಂದು ನಿನ್ನೆಯದ್ದಲ್ಲ. ಹಲವಾರು ವರ್ಷಗಳಿಂದ ಈ ಸಮಸ್ಯೆ ಇದ್ದೇ ಇದೆ. ದೊಡ್ಡ ಸ್ಟಾರ್‌ಗಳ ಚಿತ್ರಗಳು ಬಂದಾಗ ಕನ್ನಡದ ಚಿತ್ರಗಳನ್ನು ಬಲಿ ಕೊಡುವ ಕೆಲಸ ನಡೆಯುತ್ತಲೇ ಇದೆ. ಪರಭಾಷೆಯ ಮೇಲಿರುವ ವ್ಯಾಮೋಹದಿಂದಲೋ.. ಆ ಚಿತ್ರದಲ್ಲಿನ ಸೂಪರ್ ಸ್ಟಾರ್‌ಗಳ ಮೇಲಿನ ಅಭಿಮಾನದಿಂದಲೋ.. ನಮ್ಮ ರಾಜ್ಯದಲ್ಲಿ ಕನ್ನಡದ ಚಿತ್ರಗಳ ಕತ್ತು ಹಿಸುಕಿಯಾದರೂ ಬೇರೆ ಭಾಷೆಯ ಚಿತ್ರಗಳಿಗೆ ಅವಕಾಶ ಮಾಡಿ ಕೊಡಲಾಗುತ್ತೆ
ಇನ್ನೂ ಎಲ್ಲರಿಗೆ ಗೊತ್ತಿರುವಂತೆ ಕರುನಾಡಿನಲ್ಲಿರುವ ಮಲ್ಟಿಫ್ಲೆಕ್ಸ್‌ಗಳಿಗೆ ಪರಭಾಷೆಯ ಚಿತ್ರಗಳ ಮೇಲೆ ಎಲ್ಲಿಲ್ಲದ ಪ್ರೀತಿ. ಪ್ರೈಮ್ ಟೈಮ್ ಶೋಗಳನ್ನೆಲ್ಲಾ ಪರಭಾಷೆಗಳಿಗೆ ಮೀಸಲಾಗಿ ಇಡಲಾಗಿರುತ್ತೆ. ಇದೆಲ್ಲದರಿಂದ ಕನ್ನಡ ಚಿತ್ರಗಳು ನಷ್ಟ ಅನುಭವಿಸುತ್ತವೆ.
ಸದ್ಯ ಕನ್ನಡಿಗರ ಹೃದಯ ಗೆದ್ದು ಬಾಕ್ಸಾಫೀಸ್‌ನಲ್ಲಿ ಹಣದ ಹೊಳೆ ಹರಿಸುತ್ತಿರುವ ” ಸು ಫ್ರಮ್ ಸೋ” ಚಿತ್ರಕ್ಕೂ ಇದೇ ತರಹದ ಸಮಸ್ಯೆಯಾಗಿದೆಯಾ ? ಕೂಲಿ ಮತ್ತು ವಾರ್ 2 ಚಿತ್ರಗಳಿಂದ ನಷ್ಟ ಆಗಿದೆಯಾ..? ಎನ್ನುವ ಪ್ರಶ್ನೆ ಹಲವರಲ್ಲಿದೆ. ಈ ಪ್ರಶ್ನೆಗಳಿಗೆ ನಿಮ್ಮ ”ಫಿಲ್ಮಿಬೀಟ್ ಕನ್ನಡ”ಗೆ ಈಗಾಗಲೇ ಚಿತ್ರದ ನಿರ್ಮಾಪಕ ರಾಜ್ ಬಿ ಶೆಟ್ಟಿ ಉತ್ತರವನ್ನು ನೀಡಿದ್ದಾರೆ. ಇದೀಗ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾದ ಉಮೇಶ್ ಬಣಕಾರ್ ”ಫಿಲ್ಮಿ ಬೀಟ್ ಕನ್ನಡ” ಜೊತೆ ಮಾತನಾಡಿದ್ದಾರೆ. ಈ ಕುರಿತು ಮಾತನಾಡಿರುವ ಉಮೇಶ್ ಬಣಕಾರ್ ”ಕೂಲಿ” ಮತ್ತು ”ವಾರ್ 2” ಚಿತ್ರದಿಂದ ”ಸು ಫ್ರಮ್ ಸೋ”ಗೆ ಯಾವುದೇ ಧಕ್ಕೆಯಾಗಿಲ್ಲ ನಷ್ಟ ಆಗಿಲ್ಲ ಎಂದು ಹೇಳಿದ್ಧಾರೆ. ” ಸು ಫ್ರಮ್ ಸೋ” ಚಿತ್ರಕ್ಕೆ ಅದ್ರದ್ದೇ ಆದ ಪ್ರೇಕ್ಷಕರ ವರ್ಗ ಸೃಷ್ಟಿಯಾಗಿದೆ, ಬಾಯಿ ಮಾತಿನ ಪ್ರಚಾರದಿಂದಲೇ ಆ ಚಿತ್ರಕ್ಕೆ ಹಲವಾರು ಜನ ಬರುತ್ತಿದ್ದಾರೆ ಇಷ್ಟೇ ಅಲ್ಲದೇ ಒಮ್ಮೆ ನೋಡಿದವರು ಕೂಡ ಮತ್ತೆ ಮತ್ತೆ ” ಸು ಫ್ರಮ್ ಸೋ” ಚಿತ್ರವನ್ನು ನೋಡುತ್ತಿದ್ದಾರೆ. ಹೆಚ್ಚೆಂದರೆ 1 % ಅಥವಾ 2 % ಗಳಿಕೆಯಲ್ಲಿ ಕಡಿಮೆಯಾಗಿರಬಹುದು” ಎಂದು ಹೇಳಿದ್ದಾರೆ.
ಇನ್ನು.. ಪರಭಾಷೆಗಳಿಂದ ”ಸು ಫ್ರಮ್ ಸೋ” ಚಿತ್ರಕ್ಕೆ ಹಿನ್ನೆಡೆಯಾಗಿಲ್ಲ ಆದರೆ ವಿಶೇಷ ಅಂದರೆ ಈ ಚಿತ್ರದ ಕ್ರೇಜ್ ಕಂಡು ನಮ್ಮಲ್ಲಿಯೇ ಅನೇಕರು ತಮ್ಮ ಚಿತ್ರದ ಬಿಡುಗಡೆಯನ್ನು ಮುಂದೂಡುತ್ತಿದ್ದಾರೆ. ಉದಾಹರಣೆಗೆ ಹಿರಿಯ ನಿರ್ದೇಶಕರಾದ ಓಂ ಸಾಯಿ ಪ್ರಕಾಶ್ ಅವರ ”ಸೆಪ್ಟೆಂಬರ್ 10” ಚಿತ್ರ ಇದೇ ತಿಂಗಳು ಆಗಸ್ಟ್ 8ರಂದು ಬಿಡುಗಡೆಯಾಗಬೇಕಿತ್ತು. ಒಂದು ಹಂತದ ಪ್ರಚಾರವನ್ನು ಕೂಡ ಮಾಡಲಾಗಿತ್ತು. ಆದರೆ ” ಸು ಫ್ರಮ್ ಸೋ” ನಾಗಾಲೋಟವನ್ನು ನೋಡಿ ಅವರು ಈಗ ತಮ್ಮ ಚಿತ್ರದ ಬಿಡುಗಡೆಯನ್ನು ಮುಂದೂಡಿದ್ದಾರೆ ಎಂದು ಉಮೇಶ್ ಬಣಕಾರ್ ”ಫಿಲ್ಮಿ ಬೀಟ್ ಕನ್ನಡ”ಗೆ ಪ್ರತಿಕ್ರಿಯೆಯನ್ನು ನೀಡಿದ್ಧಾರೆ. ಕೇವಲ ಇದೊಂದೇ ಚಿತ್ರ ಅಲ್ಲ ಇನ್ನು ಕೆಲವರು ಕೂಡ ಒಂದು ಕಡೆ ” ಸು ಫ್ರಮ್ ಸೋ” ಅಲೆ ಇದೆ ಮತ್ತೊಂದು ಕಡೆ ”ಕೂಲಿ” ಮತ್ತು ”ವಾರ್ 2” ತೆರೆಗೆ ಬರುತ್ತಿವೆ. ಈ ಸುನಾಮಿಯ ನಡುವೆ ಸಿಲುಕಿ ಹಾಕಿಕೊಳ್ಳುವುದು ಬೇಡ ಎಂದುಕೊಂಡು ಅನೇಕ ಹೊಸ ತಂಡಗಳು ತಮ್ಮ ಚಿತ್ರಗಳ ಬಿಡುಗಡೆಯನ್ನು ಮುಂದೂಡಿದ್ದಾರೆ ಎಂದು ಕೂಡ ಉಮೇಶ್ ಬಣಕಾರ್ ಹೇಳಿದ್ದಾರೆ. ಇನ್ನು ಕನ್ನಡ ಚಿತ್ರಕ್ಕೆ ಕನ್ನಡದ ಚಿತ್ರಗಳೇ ಸ್ಫರ್ಧೆ ನೀಡಿದಂತೆ ”ಸು ಫ್ರಮ್ ಸೋ” ಮುಂದೆ ತೆರೆಗೆ ಬಂದ ಕೆಲ ಒಳ್ಳೆಯ ಕನ್ನಡ ಸಿನಿಮಾಗಳು ಕೂಡ ಚಿತ್ರಮಂದಿರದಲ್ಲಿ ಉಳಿಯಲಿಲ್ಲ. ಚಿತ್ರ ಚೆನ್ನಾಗಿದ್ದರು ”ಸು ಫ್ರಮ್ ಸೋ” ಭರಾಟೆಯ ನಡುವೆ ಬೇರೆ ಚಿತ್ರದ ಕಡೆಗೆ ಗಮನ ಕೊಡಲಿಲ್ಲ ಎಂದು ಉಮೇಶ್ ಬಣಕಾರ್ ಪ್ರತಿಕ್ರಿಯೆ ನೀಡಿದ್ಧಾರೆ.
