ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೊಪಿಯಾಗಿರುವ ದರ್ಶನ್ ಮತ್ತೆ ಜೈಲು ಸೇರಿದ್ದಾರೆ. ಈ ವೇಳೆ ದರ್ಶನ್ ನಟಿಸಿದ ‘ಡೆವಿಲ್’ ಸಿನಿಮಾದ ರಿಲೀಸ್ ಆಗುತ್ತೋ ಇಲ್ವೋ ಅನ್ನೋ ಆತಂಕದಲ್ಲಿ ಅವರ ಅಭಿಮಾನಿಗಳು ಇದ್ದಾರೆ. ಈಗಾಗಲೇ ದರ್ಶನ್ ತಮ್ಮ ಅನುಪಸ್ಥಿತಿಯಲ್ಲಿ ‘ಡೆವಿಲ್’ ಸಿನಿಮಾವನ್ನು ರಿಲೀಸ್ ಮಾಡುವುದಕ್ಕೆ ಅನುಮತಿಯನ್ನೂ ನೀಡಿದ್ದಾರೆ. ಒಂದ್ಕಡೆ ದರ್ಶನ್ ಇಲ್ಲದೆ ಸಿನಿಮಾ ರಿಲೀಸ್ ಮಾಡೋದು ಹೇಗೆ? ಅನ್ನೋ ಚರ್ಚೆ ಕೂಡ ನಡೆಯುತ್ತಿದೆ.
ಸದ್ಯ ‘ಡೆವಿಲ್’ ಸಿನಿಮಾದ ನಿರ್ಮಾಪಕ-ನಿರ್ದೇಶಕ ಮಿಲನ್ ಪ್ರಕಾಶ್ ಏನು ನಿರ್ಧಾರ ತೆಗೆದುಕೊಳ್ಳುತ್ತಾರೋ ಮುಂದಿನ ದಿನಗಳಲ್ಲಿ ಗೊತ್ತಾಗುತ್ತೆ. ಆದರೆ, ಸದ್ಯ ‘ಡೆವಿಲ್’ ಸಿನಿಮಾದ ಸಾಂಗ್ ಒಂದನ್ನು ಗಣೇಶನ ಹಬ್ಬಕ್ಕೆ ಬಿಡುಗಡೆ ಮಾಡಲಾಗುತ್ತಿದೆ. ಇದೇ ಈಗ ದರ್ಶನ್ ಅಭಿಮಾನಿಗಳಿಗೆ ಸಮಾಧಾನ ತಂದು ಕೊಟ್ಟಿದೆ. ಇದು ‘ಡೆವಿಲ್’ ಕಥೆಯಾದರೆ, ಇಂತಹದ್ದೇ ಒಂದು ಸನ್ನಿವೇಶ ಸಾರಥಿ ಸಮಯದಲ್ಲೂ ನಡೆದಿತ್ತು.
‘ಸಾರಥಿ’ ರಿಲೀಸ್ ವೇಳೆನೂ ಸಾಂಸಾರಿಕ ಸಮಸ್ಯೆ ಹಿನ್ನೆಲೆಯಲ್ಲಿ ದರ್ಶನ್ ಜೈಲು ಸೇರಿದ್ದರು. ಆ ವೇಳೆ ನಿರ್ಮಾಪಕ ರಿಸ್ಕ್ ತೆಗೆದುಕೊಂಡು ದರ್ಶನ್ ಜೈಲಿನಲ್ಲಿ ಇದ್ದರೂ ‘ಸಾರಥಿ’ ಸಿನಿಮಾವನ್ನು ರಿಲೀಸ್ ಮಾಡುವುದಕ್ಕೆ ಮುಂದಾಗಿದ್ದರು. ಆ ವೇಳೆ ಅವರು ಪಟ್ಟ ಪಾಡೇನು ಅನ್ನೋದನ್ನು ಕನ್ನಡ ಪಿಚ್ಚರ್ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ. ದರ್ಶನ್ ಮೈಸೂರು ಏರಿಯಾ ಬಿಟ್ಟು ಕೊಟ್ಟಿದ್ದೇಕೆ? ದಿನಕರ್ ಬಳ್ಳಾರಿ ಏರಿಯಾ ಬಿಟ್ಟುಕೊಡಲು ಒಪ್ಪಲಿಲ್ಲ ಯಾಕೆ? ಅನ್ನೋ ಸಂಗತಿಯನ್ನು ರಿವೀಲ್ ಮಾಡಿದ್ದಾರೆ.
ನಿರ್ಮಾಪಕ ಕೆ.ವಿ ಸತ್ಯಪ್ರಕಾಶ್ ‘ಸಾರಥಿ’ ಸಿನಿಮಾವೇನೋ ಮಾಡಿದ್ದರು. ಆದರೆ ಬಿಡುಗಡೆಗೆ ಮಾಡುವುದಕ್ಕೆ ಎಷ್ಟು ಪರದಾಡಿದರು ಅನ್ನೋದನ್ನು ರಿವೀಲ್ ಮಾಡಿದ್ದಾರೆ. “ರಿಲೀಸ್ ವೇಳೆ ನಾವು ಪಟ್ಟ ಕಷ್ಟ ಯಾವ ಶತ್ರುಗಳಿಗೂ ಬರಬಾರದು. ಕಾರಣ ನಿಮಗೆ ಗೊತ್ತಿದೆ. ಆ ಸಂದರ್ಭದಲ್ಲೂ ನಮ್ಮ ಹೀರೋ ಸರ್‌ದು ಹೀಗೆ ಆಗಿತ್ತು. ಸಾಂಸಾರಿಕ ಕೌಟುಂಬಿಕ ಸಮಸ್ಯೆಯಿಂದ ಜೈಲಿನಲ್ಲಿದ್ದರು. ಅದು ಎಲ್ಲರಿಗೂ ಗೊತ್ತಿರುವ ವಿಚಾರನೇ. ಸಿನಿಮಾ ಮುಗಿದಿತ್ತು. ರಿಲೀಸ್ ಆಗಬೇಕಿತ್ತು. ಆದರೆ, ಸೆನ್ಸಾರ್ ಸರ್ಟಿಫಿಕೇಟ್ ಬಂದಿರಲಿಲ್ಲ. ಹಿಂದಿನ ದಿನ ರಾತ್ರಿ ಬಂತು” ಎಂದು ಒಂದೊಂದೇ ಸಂಗತಿಯನ್ನು ರಿವೀಲ್ ಮಾಡುತ್ತಾ ಹೋಗಿದ್ದಾರೆ.
‘ಸಾರಥಿ’ ಸಿನಿಮಾ ರಿಲೀಸ್ ಮಾಡಬೇಕು ಅಂತ ಡೇಟ್ ಹಾಕಿಸುವುದಕ್ಕೆ ಜೈಲಿನಲ್ಲಿ ದರ್ಶನ್ ಭೇಟಿ ಮಾಡುವುದಕ್ಕೆ ನಿರ್ಮಾಪಕರು ಹೋಗಿದ್ದರು. ಅಲ್ಲಿ ದರ್ಶನ್ ಭೇಟಿ ಮಾಡಿ ಸಿನಿಮಾ ರಿಲೀಸ್ ಬಗ್ಗೆ ಮಾತುಕತೆಯನ್ನೂ ನಡೆಸಿದ್ದರು. ಆಗ ದರ್ಶನ್ ಹೇಳಿದ್ದಿದು. “ನೋಡಿ ನಿರ್ಮಾಪಕರೇ ಸಿನಿಮಾ ಬಜೆಟ್ ಜಾಸ್ತಿಯಾಗಿದೆ. ಯೋಚನೆ ಮಾಡಿ ನೋಡಿ. ದುಡುಕಬೇಡಿ, ನಾನು ಬೇರೆ ಇಲ್ಲಿದ್ದೀನಿ. ಪ್ರಮೋಷನ್ ಮಾಡುವುದಕ್ಕೆ ಆಗುವುದಿಲ್ಲ. ನೀವು ಮನೆ-ಮಠ ಮಾರಿ ದುಡ್ಡು ತಂದು ಹಾಕಿರುತ್ತೀರ. ಸಿನಿಮಾ ರಿಲೀಸ್ ಮಾಡಿ ಅಂತ ನಾನು ಹೇಗೆ ಹೇಳಲಿ? ಯೋಚನೆ ಮಾಡಿ ನೋಡಿ” ಎಂದು ದರ್ಶನ್ ನಿರ್ಮಾಪಕರಿಗೆ ಹೇಳಿದ್ದರಂತೆ. ಸಿನಿಮಾ ಆರಂಭಕ್ಕೂ ಮುನ್ನ ಹಳೆಯ ನಿರ್ಮಾಪಕರು ದರ್ಶನ್ ಅವರಿಗೆ ಮೈಸೂರು ಏರಿಯಾವನ್ನೂ, ದಿನಕರ್ ಅವರಿಗೆ ಬಳ್ಳಾರಿ ಏರಿಯಾವನ್ನೂ ಬಿಟ್ಟುಕೊಟ್ಟಿದ್ದರಂತೆ. ಆದರೆ, ಸಿನಿಮಾ ಅಂದುಕೊಂಡಿದ್ದಕ್ಕಿಂತ ಡಬಲ್ ಬಜೆಟ್ ಆಗಿತ್ತು. ಅದನ್ನು ದರ್ಶನ್ ಬಳಿ ಜೈಲಿನಲ್ಲಿಯೇ ಪ್ರಸ್ತಾಪ ಮಾಡಿದ್ದರು. ಆಗ ದರ್ಶನ್ ರಿಯಾಕ್ಷನ್ ಹೀಗಿತ್ತು. “ಈ ಸಿನಿಮಾ ಆರಂಭ ಮಾಡುವುದಕ್ಕೆ ಮುನ್ನ ನಮ್ಮ ಚಂದ್ರಣ್ಣ ಅವರು ದಿನಕರ್ ಅವರಿಗೆ ಒಂದು ಏರಿಯಾವನ್ನು ಸಂಭಾವನೆ ಬದಲಾಗಿ ಬರೆದು ಕೊಟ್ಟಿದ್ದರು. ದರ್ಶನ್ ಅವರೀಗ ಮೈಸೂರು ಏರಿಯಾ ಬರೆದುಕೊಟ್ಟಿದ್ದರು. ನಾಳೆ ನಾಡಿದ್ದು ರಿಲೀಸ್ ಮಾಡಬೇಕು. ಆಗ ದರ್ಶನ್ ಅವರ ಏರಿಯಾ ಇತ್ತಲ್ಲ. ಆಗ ಏನು ಮಾಡೋಣ ಅಂತ ಕೇಳಿದೆ. ಆಗ ಅವರು ನಿರ್ಮಾಪಕರೇ ನಿಮಗೆ ಒಳ್ಳೆಯದಾಗುತ್ತೆ ಅಂದರೆ ತಗೊಳ್ಳಿ. ನನ್ನ ಸಂಭಾವನೆ ಏನಿದೆ ಅದು ಕೊಡಿ ಅಂದರು. ಈಗ ಯಾವ ಹೀರೋ ಹೇಳ್ತಾರೆ ಹೇಳಿ? ಇನ್ನು ಬಳ್ಳಾರಿ ಏರಿಯಾವನ್ನು ದಿನಕರ್ ಅವರಿಗೆ ಕೊಟ್ಟಿದ್ವಿ. ಅದನ್ನು ದಿನಕರ್ ಅವರು ಬಿಟ್ಟು ಕೊಡುವುದಕ್ಕೆ ಒಪ್ಪಲಿಲ್ಲ. ಸರಿ ಆಯ್ತು ಅಂತ ರಿಲೀಸ್ ಮಾಡಿದ್ವಿ.” ಎಂದು ಹೇಳಿದ್ದಾರೆ. ‘ಸಾರಥಿ’ ಸಿನಿಮಾ ಬಜೆಟ್ ವಿಚಾರಕ್ಕೂ ಗಾಂಧಿನಗರ ಆಡಿಕೊಂಡಿತ್ತಂತೆ “ಯಾರೋ ಹುಡುಗ ಹುಚ್ಚನ ರೀತಿ ಸಿನಿಮಾ ಮಾಡುತ್ತಿದ್ದಾನೆ. ಸಿನಿಮಾ ಇಂಡಸ್ಟ್ರಿ ಬಗ್ಗೆ ಗೊತ್ತಿಲ್ಲ. ದರ್ಶನ್ ಸಿನಿಮಾ 7 ರಿಂದ 8 ಕೋಟಿ ಒಳಗೆ ಸಿನಿಮಾ ಮಾಡಿದರೆ ಸೇಫ್ ಆಗುತ್ತಾರೆ. ಇಲ್ಲಾ ಅಂದರೆ ಹಣ ಬರುವುದಿಲ್ಲ ಎಂದು ಎಲ್ಲರೂ ಮಾತಾಡುತ್ತಿದ್ದರು. ನಾನು ಬರೆಬೇಕಾದರೂ ಯಾವುದೂ ಹಣ ತಂದಿಲ್ಲ. ನಮ್ಮ ತಂದೆ ಆಸ್ತಿ ಯಾವುದನ್ನೂ ಮಾರಿಲ್ಲ. ನಾನು ಸ್ವಂತ ದುಡಿದ ಹಣವಿದು. ಏನೇ ಆದರೂ ರಿಲೀಸ್ ಮಾಡೇ ಬಿಡೋಣ ಅಂತ ಹೇಳಿ ಮಾಡಿದೆ. ಅವತ್ತಿನ ಕಾಲಕ್ಕೆ ದರ್ಶನ್ ಅವರಿಗೆ ಡಬಲ್ ಬಜೆಟ್.” ಎನ್ನುತ್ತಾರೆ. ದರ್ಶನ್ ಜೈಲಿಗೆ ಹೋಗಿದ್ದರಿಂದ ‘ಸಾರಥಿ’ ಸಿನಿಮಾವನ್ನು ರಿಲೀಸ್ ಮಾಡುವುಕ್ಕೆ ಕೆಲವು ಥಿಯೇಟರ್ ಮಾಲೀಕರು ಮುಂದೆ ಬಂದಿರಲಿಲ್ಲ. ಆ ಘಟನೆಯನ್ನೂ ನೆನಪಿಸಿಕೊಂಡಿದ್ದಾರೆ. “ಐದು ದಿನ ಆದ್ಮೇಲೆ ಪರಮಾತ್ಮ ಸಿನಿಮಾ ರಿಲೀಸ್ ಇತ್ತು. ಥಿಯೇಟರ್‌ಗಳನ್ನು ಕೊಟ್ಟರೂ ಸಾಕು ಅಂತಿತ್ತು. ಅವತ್ತಿನ ಕಷ್ಟ ಯಾವ ಶತ್ರುಗೂ ಬರಬಾರದು. ಎರಡು ಗಂಟೆಯಲ್ಲಿ ಸಮಸ್ಯೆ ಬಗೆ ಹರಿಯಿತು. ಆಗ ನೆಗೆಟಿವ್‌ಗಳನ್ನೆಲ್ಲ ಬಿಡಿಸಿಕೊಂಡು ಬಂದ್ವಿ. ಅವತ್ತಿನ ಕಾಲಕ್ಕೆ ಥಿಯೇಟರ್‌ನಿಂದಲೇ ₹2.50 ಕೋಟಿ ಅಡ್ವಾನ್ಸ್ ಬರುತ್ತೆ ಅಂತಿತ್ತು. ನಮಗೆ ಕಮಿಟ್‌ಮೆಂಟ್ ಇದ್ದಿದ್ದೇ ₹80 ಲಕ್ಷ ಅದನ್ನು ಮಾಡುವುದಕ್ಕೆ ಆಗಲಿಲ್ಲ. ಕೆಲವು ಥಿಯೇಟರ್‌ಗಳು ಐದು ದಿನ ಆದ್ಮೇಲೆ ಪರಮಾತ್ಮ ಹಾಕ್ತೀವಿ ಅಂತ ಕಂಡಿಷನ್ ಹಾಕಿ ಕೊಟ್ಟರು.” ಎನ್ನುತ್ತಾರೆ.
